ಕರ್ನಾಟಕದ (ಕೋರಮಂಡಲ ಮತ್ತು ಅದರ ಹಿನ್ನಾಡಿನ ಪ್ರದೇಶಕ್ಕೆ ಐರೋಪ್ಯರು ಇಟ್ಟಿದ್ದ ಹೆಸರು) ನವಾಬ ದೋಸ್ತ್ ಆಲಿಯ ಅಳಿಯ. 1749 ರಿಂದ 1752ರ ವರೆಗೆ ನವಾಬನಾಗಿದ್ದವ. 1741ರಲ್ಲಿ ಮರಾಠರು ಕರ್ನಾಟಕದ ಮೇಲೆ ದಂಡೆತ್ತಿ ಹೋಗಿ, ನವಾಬ್ ದೋಸ್ತ್ ಆಲಿಯನ್ನು ಕೊಂದು ಚಂದಾ ಸಾಹೇಬನನ್ನು ಸೆರೆಹಿಡಿದರು. ದೋಸ್ತ್ ಆಲಿಯ ಮಗ ಸಫ್ದರ್ ಆಲಿ ಮರಾಠರಿಗೆ ಒಂದು ಕೊಟಿ ರೂ. ಕೊಡುವುದಾಗಿ ವಾಗ್ದಾನ ಮಾಡಿ ತಲೆ ಉಳಿಸಿಕೊಂಡ. ಆದರೆ ಸ್ವಲ್ಪ ಕಾಲಾನಂತರ ಅವನ ದಾಯಾದಿಗಳು ಅವನನ್ನು ಕೊಂದರು. ಅವನ ಚಿಕ್ಕ ವಯಸ್ಸಿನ ಮಗ ನವಾಬನಾದ. ಈ ಭಾಗ ದಖನ್ನಿನ ಸುಬೇದಾರನಾಗಿದ್ದ ಹೈದರಾಬಾದ್ ನಿಜಾಮನ ಅಧಿಕಾರಕ್ಕೆ ಒಳಪಟ್ಟಿತ್ತಾದರೂ ಅವನು ಸ್ವತಃ ಮರಾಠರ ವಿರುದ್ಧ ಸೆಣಸಾಟದಲ್ಲಿ ಹಾಗೂ ಉತ್ತರ ಭಾರತದ ರಾಜಕೀಯದಲ್ಲಿ ಸಿಲುಕಿದ್ದುದರಿಂದ ಇದರತ್ತ ಗಮನ ಹರಿಸಲಾಗಿರಲಿಲ್ಲ. ಪರಿಸ್ಥಿತಿ ಹದಗೆಟ್ಟಾಗ ಅವನು ಆರ್ಕಾಟಿಗೆ ಬಂದು, ಅನ್ವರ್-ಉದ್-ದೀನ್ ಖಾನನನ್ನು ನವಾಬನನ್ನಾಗಿ ನೇಮಿಸಿದ. ಇದರಿಂದ ಪರಿಸ್ಥಿತಿ ಇನ್ನೂ ಹದಗೆಟ್ಟಿತು. ಅವನಿಗೂ ದೋಸ್ತ್ ಆಲಿಯ ಬಂಧುಗಳಿಗೂ ದ್ವೇಷ ಬೆಳೆಯಿತು.

1748ರಲ್ಲಿ ಮರಾಠರು ಚಂದಾ ಸಾಹೇಬನನ್ನು ಬಂಧನದಿಂದ ವಿಮೋಚನೆಗೊಳಿಸಿದಾಗ ಅವನಿಗೆ ಆರ್ಕಾಟಿನ ಸಿಂಹಾಸನದ ಆಸೆ ಪ್ರಬಲವಾಯಿತು. ಪುದುಚೇರಿಯಲ್ಲಿ ಫ್ರೆಂಚ್ ಗವರ್ನರ್ ಆಗಿದ್ದ ಡುಪ್ಲೆಕ್ಸನ ನೆರವಿನಿಂದ ಅವನು ತನ್ನ ಕಾರ್ಯ ಸಾಧಿಸಿಕೊಳ್ಳಲು ಬಂiÀÄಸಿ ಅವನೊಂದಿಗೆ ಒಪ್ಪಂದ ಮಾಡಿಕೊಂಡ. ದಖನ್ನಿನ ಸಿಂಹಾಸನವನ್ನು ಸ್ಥಾಪಿಸಿದ ಆಸಫ್ ಝಾ ನಿಜಾಂ-ಉಲ್-ಮುಲ್ಕ್ 1748ರಲ್ಲಿ ತೀರಿಕೊಂಡಿದ್ದರಿಂದ ಆ ಸಿಂಹಾಸನಕ್ಕಾಗಿಯೂ ಕಲಹ ಆರಂಭವಾಗಿತ್ತು. ಆಸಫ್ ಝಾನ ಮಗ ನಾಸಿರ್ ಜಂಗ್ ಸಿಂಹಾಸನವನ್ನೇರಿದ್ದನಾದರೂ, ಮೊಗಲ್ ಚಕ್ರವರ್ತಿ ತನ್ನನ್ನು ದಖನ್ನಿನ ಸುಬೇದಾರನಾಗಿ ನೇಮಿಸಿದ್ದನೆಂದು ಆಸಫ್ ಝಾನ ಮೊಮ್ಮಗ ಮುಜ಼ಫರ್ ಜಂಗ್ ವಾದ ಹೂಡಿದ್ದ. ಅವನನ್ನು ದಖನ್ನಿನ ಸಿಂಹಾಸನದ ಮೇಲೆ ಕೂರಿಸುವುದಾಗಿ ಡುಪ್ಲೆಕ್ಸ್ ಅವನೊಂದಿಗೂ ಒಪ್ಪಂದ ಮಾಡಿಕೊಂಡ.

ಫ್ರೆಂಚರೂ ಮುಜ಼ಫರ್ ಜಂಗನೂ ಚಂದಾ ಸಾಹೇಬನೂ ಸೇರಿ ಅನ್ವರ್-ಉದ್-ದೀನನ ವಿರುದ್ಧ ವೆಲ್ಲೂರಿಗೆ ಆಗ್ನೇಯದಲ್ಲಿರುವ ಅಂಬೂರಿನಲ್ಲಿ ನಡೆಸಿದ ಕದನದಲ್ಲಿ ಅನ್ವರ್-ಉದ್-ದೀನ್ ಸತ್ತ. ಅವನ ಮಗ ಮಹಮ್ಮದ್ ಆಲಿ ತಂಜಾವೂರಿಗೆ ಓಡಿಹೋಗಿ ತಲೆ ಮರೆಸಿಕೊಂಡ. ಚಂದಾ ಸಾಹೇಬ್ ಆರ್ಕಾಟಿನಲ್ಲಿನ ಕರ್ನಾಟಕದ ನವಾಬನಾಗಿ ಆಳತೊಡಗಿದ.

ಫ್ರೆಂಚರ ಸೇನೆ ತಿರುಚಿನಾಪಳ್ಳಿಯನ್ನು ಮುತ್ತಿತು. ಮುಹಮ್ಮದ್ ಆಲಿಯ ನೆರವಿಗೆ ಧಾವಿಸಿದ ನಾಸಿರ್ ಜಂಗ್ ಯುದ್ಧದಲ್ಲಿ ಸತ್ತ. ಸೆರೆಯಲ್ಲಿದ್ದ ಮುಜ಼ಫರ್ ಜಂಗನನ್ನು ಫೆಂಚರು ಬಿಡುಗಡೆ ಮಾಡಿ ಅವನನ್ನು ಹೈದರಾಬಾದಿನ ಸುಬೇದಾರನೆಂದು ಘೋಷಿಸಿದರು.
ಆದರೆ ಫ್ರೆಂಚರು ತಿರುಚಿನಾಪಳ್ಳಿಯ ಮುತ್ತಿಗೆಯನ್ನು ತೀವ್ರಗೊಳಿಸಲಾರದೆ ಹೋದರು. ಅಲ್ಲಿ ತಡವಾದಷ್ಟೂ ಮಹಮ್ಮದ್ ಆಲಿಯ ಕೈ ಮೇಲಾಯಿತು. ಬ್ರಿಟಿಷರು ಹೆಚ್ಚು ಸೈನ್ಯ ಕಳಿಸಿದರು. 1751ರ ಅಂತ್ಯದ ವೇಳೆಗೆ ಮೈಸೂರು, ತಂಜಾವೂರು ಮತ್ತು ಮರಾಠರ ನೆರವೂ ದೊರಕಿತು. ತಿರುಚಿನಾಪಳ್ಳಿಯ ಮುತ್ತಿಗೆಯಲ್ಲಿ ನಿರತನಾಗಿದ್ದ ಚಂದಾ ಸಾಹೇಬನ ಗಮನವನ್ನು ಬೇರೆಡೆಗೆ ಸೆಳೆಯುವ ಉದ್ದೇಶದಿಂದ ಕೇವಲ ಇನ್ನೂರು ಮಂದಿ ಐರೋಪ್ಯರನ್ನೂ ಮುನ್ನೂರು ಮಂದಿ ಭಾರತೀಯ ಸಿಪಾಯಿಗಳನ್ನೂ ಒಳಗೊಂಡ ಸೇನೆಯೊಂದು ಕ್ಲೈವನ ನೇತೃತ್ವದಲ್ಲಿ ಮುತ್ತಿಗೆ ಹಾಕಿತು, ಚಂದಾ ಸಾಹೇಬ್ ಕೊಡಲೇ ದೊಡ್ಡ ಸೇನೆಯೊಂದಿಗೆ ಆರ್ಕಾಟಿಗೆ ಹೋದ 53 ದಿನಗಳ ಕದನದ ಅನಂತರ ಆ ಸೇನೆ ಹಿಮ್ಮೆಟ್ಟಬೇಕಾಯಿತು. ಕ್ಲೈವನ ವಿಜಯದಿಂದ ಫ್ರೆಂಚರ ಸೇನೆಯ ಧೈರ್ಯ ಕುಗ್ಗಿತು. ಇಂಗ್ಲಿಷರು ಅಲ್ಲೂ ಗೆದ್ದರು. ಚಂದಾ ಸಾಹೇಬ್ ಸೆರೆಸಿಕ್ಕಿದ. ತಂಜಾವೂರಿನ ದೊರೆ ಅವನನ್ನು ಕೊಲ್ಲಿಸಿದ. 	  (ಬಿ.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ